Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೇಬಿ ಮಿಸ್ಸಿಂಗ್ ಪ್ರಕರಣಕ್ಕೆ ಹೊಸ ತಿರುವು.... 3/5 ***
Posted date: 21 Sat, Jan 2023 09:07:41 AM
ಮಗುವೊಂದರ ಕಿಡ್ನಾಪ್ ಪ್ರಕರಣದ ಹಿಂದೆ ಯಾವೆಲ್ಲ ಹಿತಾಸಕ್ತಿಗಳ ಕೈವಾಡವಿರುತ್ತದೆ  ಎಂಬುದನ್ನು ಹೇಳುವ ಪ್ರಯತ್ನವೇ ಬೇಬಿ ಮಿಸ್ಸಿಂಗ್. 
 
ನಗರ ಪ್ರದೇಶಗಳಲ್ಲಿ  ಹೆಚ್ಚಾಗಿ ಪುಟ್ಟ ಮಕ್ಕಳ ಅಪಹರಣ  ಪ್ರಕರಣ ನಡೆಯುತ್ತವೆ. ಶ್ರೀಮಂತರ ಮಕ್ಕಳನ್ನು ಅಪಹರಿಸಿ ಕೋಟಿಗಟ್ಟಲೆ ಹಣದ ಬೇಡಿಕೆ ಇಡುವುದು, ಆ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವುದು ಹಿಂದಿನಿಂದ ನಡೆದಿದೆ. ಈಗ ಕೇವಲ  ಹಣವಷ್ಟೇ ಅಲ್ಲ,  ಬೇರೆ ಬೇರೆ ಕಾರಣಗಳಿಗಾಗಿ ಕಿಡ್ನಾಪ್ ಕೇಸ್  ನಡೆಯುತ್ತಿವೆ. ಅದನ್ನು  ಹುಡುಕುತ್ತಾ ಹೋದಂತೆ ಅನೇಕ ರೋಚಕ ಸಂಗತಿಗಳು ಹೊರಬೀಳುತ್ತವೆ. ಈ ಅಪಹರಣ ಅಥವಾ ಕಿಡ್ನಾಪ್ ಪ್ರಕರಣಗಳ ಹಿಂದೆ ದುಷ್ಟಶಕ್ತಿಗಳ. ಜಾಲವೇ ಅಡಗಿರುತ್ತದೆ. ಇಂಥದ್ದೇ ಕಥೆಯೊಂದನ್ನು ಬೇಬಿ ಮಿಸ್ಸಿಂಗ್ ಹೇಳುತ್ತದೆ. 
 
ಶ್ರೀಮಂತ ದಂಪತಿಗಳ ಮಗು ಅವ್ಯುಕ್ತ(ಬೇಬಿ ಐಸಿರಿ ) ಅಪಹರಣದ ಹಿಂದೆ ಕಾಣದ ಕೈಗಳು ಹೇಗೆಲ್ಲಾ ಕೆಲಸ ಮಾಡುತ್ತವೆ ಎಂಬುದನ್ನು ಎಳೆ ಎಳೆಯಾಗಿ ತೆರೆಯಮೇಲೆ ತೆರೆದಿಡಲಾಗಿದೆ.
 
ಉದ್ಯಮಿಯ(ಅಶೋಕ ಕಶ್ಯಪ್)ಮಗಳು ಬೇಬಿ ಅವ್ಯುಕ್ತ(ಬೇಬಿ ಐಸಿರಿಜೈನ್)ಳನ್ನು  ಶಾಲೆಯಿಂದ ಬರುವ ವೇಳೆ ನಾಲ್ವರು ಅಪಹರಿಸುತ್ತಾರೆ. ನಂತರ ಮಗುವಿನ ಪೋಷಕರಿಗೆ ಕಾಲ್‌ಮಾಡಿ ಹಣದ ಬೇಡಿಕೆ ಇಡುತ್ತಾರೆ. ಮಗು ಸಿಕ್ಕರೆ ಸಾಕೆಂದು  ಹಣ ನೀಡಲು ಒಪ್ಪಿದ ಆ ತಂದೆ ಅವರು ಹೇಳಿದ ಜಾಗಕ್ಕೆ ಹಣ  ತೆಗೆದುಕೊಂಡು ಬರುತ್ತಾನೆ. ಆದರೆ ಹಣ ಕೊಟ್ಟರೂ ಮಗು ಸಿಗುವುದಿಲ್ಲ, ನಂತರ ಮಗು ಕಾಣೆಯಾದ ಬಗ್ಗೆ ಪೋಷಕರು ನೀಡಿದ ದೂರಿನನ್ವಯ ಪೊಲೀಸ್ ಅಧಿಕಾರಿ(ಅವಿನಾಶ್) ತನಿಖೆ ಕೈಗೊಳ್ಳುತ್ತಾರೆ. ಪ್ರಕರಣದ ಪ್ರಾಥಮಿಕ ತನಿಖೆಯಿಂದ ಮಗು ಅಪಹರಿಸಿದ ನಾಲ್ಕೂ ಜನ ರೌಡಿಗಳನ್ನು  ಮತ್ತೊಬ್ಬ ವ್ಯಕ್ತಿ ಕೊಲೆಮಾಡಿ  ಆ ಹಣದ ಬ್ಯಾಗನ್ನು ಎತ್ತಿಕೊಂಡು ಹೋಗಿರುವುದು ತಿಳಿಯುತ್ತದೆ. ಆದರೆ ಆತನಿದ್ದ ಕಾರು  ಅಪಘಾತವಾಗಿ ಮರಣ ಹೊಂದುತ್ತಾನೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ನಾಯಕ  ವಿಕ್ಕಿ (ಯಶಸ್ವಿಕಾಂತ್) ಕೈಗೆ ಮಗು ಹಾಗೂ ಹಣ ಎರಡೂ  ಸೇರುತ್ತದೆ.  ಬೆಂಗಳೂರಿನಲ್ಲಿ ತನ್ನದೇ ಆದ ಹವಾ ಇಟ್ಟುಕೊಂಡಿದ್ದ ರೌಡಿ ವರ್ಧನ್(ಶಶಿಕುಮಾರ್)ಶಿಶ್ಯರೇ ಕಿಡ್ನಾಪರ‍್ಸ್ ಎನ್ನುವುದು ಪೊಲೀಸರಿಗೆ ತಿಳಿಯುತ್ತದೆ.  ಆಗ ವರ್ಧನ್ ಗ್ಯಾಂಗ್ ಮೇಲೆ ಪೊಲೀಸರ ಕಣ್ಣು ಬೀಳುತ್ತದೆ. 
 
ಇದರ ನಡುವೆ ಮದ್ಯಮ ವರ್ಗದ ಕುಟುಂಬದ ನಾಯಕ ವಿಕ್ಕಿ(ಯಶಸ್ವಿಕಾಂತ್) ತಾನು ಪ್ರೀತಿಸುತ್ತಿದ್ದ ತನ್ನದೇ ಏರಿಯಾದ ಗೆಳತಿ (ರಕ್ಷಾ)ಯನ್ನು  ಕರೆದುಕೊಂಡು ಆ ಮಗು ಹಾಗೂ ಹಣವಿದ್ದ ಬ್ಯಾಗ್‌ನೊಂದಿಗೆ ಹೊರಡುತ್ತಾನೆ. ಮಗುವನ್ನು ಅವರ ಕುಟುಂಬಸ್ಥರ ಬಳಿ ಸೇರಿಸಲು ಹರಸಾಹಸ ಪಡುವ ನಾಯಕ ಹಾಗೂ ನಾಯಕಿ, ಮಗುವನ್ನ ಅಪಹರಿಸಲು ಡೈಮಂಡ್ ಡೀಲರ್ ಜಾನ್ ಮೂಲಕ ಹಫ್ತ ಪಡೆದು ಮುಂಬೈನಿಂದ  ಬೆಂಗಳೂರಿಗೆ ಬರುವ ಶಾರ್ಪ್ ಶೂಟರ್ ಡ್ಯಾನಿ, ಇನ್ನು ಮಗುವಿನ ಎರಡನೇ ತಂದೆ ಹಾಗೂ ಪೊಲೀಸ್ ಕಮಿಷನರ್ ಮಗುವಿಗಾಗಿ ಹುಡುಕಾಟ, ಹೀಗೆ ಒಂದಕ್ಕೊಂದು  ಕೊಂಡಿಯಂತೆ ಸಾಗುವ ಚಿತ್ರದ ಕಥೆ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ. ಕೊನೆಗೂ ಆ ಮಗು ಹೆತ್ತ ತಾಯಿಯ ಮಡಿಲನ್ನು ಸೇರುತ್ತದಾ, ಇಲ್ಲವಾ ಎನ್ನುವುದೇ ಚಿತ್ರದ ಕುತೂಹಲ. ಇಲ್ಲಿ ಮಗುವನ್ನು ಅಪಹರಿಸುವ ಸಂಚು ರೂಪಿಸಿದ್ದು ಯಾರು, ಮಗುವಿನ ಸ್ಕೂಲ್ ಬ್ಯಾಗ್‌ನಲ್ಲಿರುವ ಮಹತ್ವದ ವಸ್ತು  ಏನು, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಬೇಬಿ ಮಿಸ್ಸಿಂಗ್ ಚಿತ್ರವನ್ನು ನೀವೆಲ್ಲ ನೋಡಲೇಬೇಕು.
 
ಮೊದಲಬಾರಿಗೆ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಚಿತ್ರದ ನಿರ್ದೇಶನ ಮಾಡಿರುವ ನಾಯಕ ಯಶಸ್ವಿಕಾಂತ್ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅವರು ಮಾಡಿಕೊಂಡಿರುವ ಕಥೆ ವಿಶೇಷ ಹಾಗೂ ವಿಭಿನ್ನವಾಗಿದೆ. ಚಿತ್ರವನ್ನು ನೋಡುತ್ತಿರುವಂತೆ ಆ ಘಟನೆ ನಮ್ಮ ನಡುವೆಯೇ ನಡೆಯುತ್ತಿರುವಂತೆ ಭಾಸವಾಗುತ್ತದೆ. ಪ್ರಸ್ತುತ ಘಟನೆಗಳನ್ನೇ ಚಿತ್ರಕಥೆಗೆ ಆಯ್ಕೆ ಮಾಡಿಕೊಂಡ ನಿರ್ದೇಶಕರ ಜಾಣ್ಮೆಗೆ ಮೆಚ್ಚುಗೆ ಸೂಚಿಸಲೇಬೇಕು. ಚಿತ್ರ ತೆರೆಮೇಲೆ ರಿಯಲ್ಲಾಗಿದ್ದಷ್ಟೂ ಅದು ಪ್ರೇಕ್ಷಕರಿಗೆ ನಾಟುತ್ತದೆ. ಚಿತ್ರದ ಹಾಡುಗಳು ಹಿನ್ನೆಲೆ ಸಂಗೀತ ಚೆನ್ನಾಗಿದೆ. ಛಾಯಾಗ್ರಾಹಕರು  ಮತ್ತಷ್ಟು ಪ್ರಯತ್ನ ಪಡಬೇಕಾಗಿತ್ತು. ಇನ್ನು ಚಿತ್ರದ ಹೈಲೈಟ್ ಎಂದರೆ ಸಾಹಸ ದೃಶ್ಯಗಳು, ಅದ್ಭುತವಾದ ಆಕ್ಷನ್‌ಗಳನ್ನು ಥ್ರಿಲ್ಲರ್ ಮಂಜು ಹಾಗೂ ಮಾಸ್ ಮಾದ ಮಾಡಿಕೊಟ್ಟಿದ್ದಾರೆ. 
 
ನಾಯಕ ಯಶಸ್ವಿಕಾಂತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಟ್ಟಿಗೇ ಮೂರು ಜವಾಬ್ದಾರಿಗಳನ್ನು ನಿಭಾಯಿಸಿರುವ ಅವರ ಶ್ರಮಕ್ಕೆ ಹ್ಯಾಟ್ಸಾಫ್ ಹೇಳಬೇಕು. ನಾಯಕಿ ರಕ್ಷಾ, ಮಗುವಿನ ಪಾತ್ರದ ಬೇಬಿ ಐಸಿರಿ  ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಉಳಿದಂತೆ  ಶಶಿಕುಮಾರ್, ಸ್ಪರ್ಶ ರೇಖಾ, ಅವಿನಾಶ್, ಅಶೋಕ್ ಕಶ್ಯಪ್, ಕಡ್ಡಿಪುಡಿ ಚಂದ್ರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವೀಕೆಂಡ್ ನಲ್ಲಿ ಕುಟುಂಬಸಮೇತ ಚಿತ್ರಮಂದಿರಗಳಿಗೆ ಹೋಗಿ ವೀಕ್ಷಿಸಲು ಬೇಬಿ ಮಿಸ್ಸಿಂಗ್ ಉತ್ತಮ ಆಯ್ಕೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೇಬಿ ಮಿಸ್ಸಿಂಗ್ ಪ್ರಕರಣಕ್ಕೆ ಹೊಸ ತಿರುವು.... 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.